ಭಾಷೆ
ಕನ್ನಡ ಮತ್ತು ಸಂಸ್ಕೃತ

ಸರಿಸುಮಾರು, ಕನ್ನಡವನ್ನು ಬಳಸುವ ಸಮುದಾಯಗಳ ಹುಟ್ಟಿನ ಕಾಲದಿಂದ ಇಂದಿನವರೆಗೂ, ಸಂಸ್ಕೃತ ಮತ್ತು ಕನ್ನಡಗಳ ನಡುವಿನ ಸಂಬಂಧವು, ವಿವಾದಾಸ್ಪದವಾದ ನೆಲೆಗಳಲ್ಲಿಯೇ ಬೆಳೆದುಬಂದಿದೆ. ಅದು ಪರಸ್ಪರ ವಿರುದ್ಧವಾದ ಜನಾಂಗಿಕ ಹಾಗೂ ಭಾಷಿಕ ತಮ್ಮತನಗಳನ್ನು ಹೊಂದಿರುವ ಸಂಸ್ಕೃತಿಗಳ ನಡುವಿನ ತಾಕಲಾಟವಾಗಿ ಒಡಮೂಡಿದೆ. ಕನ್ನಡವು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದೆಯೇ ಹೊರತು ಸಂಸ್ಕೃತ ಅಥವಾ ಬೇರೆ ಯಾವುದೇ ಇಂಡೋ-ಆರ್ಯನ್ ಭಾಷೆಯಿಂದ ಅಲ್ಲವೆನ್ನುವ ವಿಷಯದ ಬಗ್ಗೆ ಈಗ ಯಾವುದೇ ಅನುಮಾನ ಉಳಿದಿಲ್ಲ. ಆದರೂ ಕನ್ನಡ ಸಮುದಾಯಗಳ ಒಂದು ಭಾಗದಲ್ಲಿ ಕನ್ನಡವು ಸಂಸ್ಕೃತದಿಂದಲೇ ಹುಟ್ಟಿದೆಯೆಂಬ ಆಳವಾದ ನಂಬಿಕೆಯಿದೆ. ಕನ್ನಡ ಶಬ್ದಕೋಶದಲ್ಲಿ ಹೇರಳವಾಗಿ ತುಂಬಿಕೊಂಡಿರುವ ಸಂಸ್ಕೃತ ಪದಗಳು ಇಂತಹ ತಪ್ಪು ತಿಳಿವಳಿಕೆಗೆ ಒಂದು ಕಾರಣ. ಅದರ ಜೊತೆಗೆ ಇಪ್ಪತ್ತನೆಯ ಶತಮಾನದ ಮೊದಲಿನಿಂದಲೂ, ನಮ್ಮ ಶಾಲೆ-ಕಾಲೇಜುಗಳಲ್ಲಿ ಕನ್ನಡವನ್ನು ಕಲಿಸಿರುವ ಕ್ರಮದಲ್ಲಿಯೇ ಇಂತಹುದೊಂದು ಆಲೋಚನೆಗೆ ಅವಕಾಶ ಸಿಕ್ಕಿದೆ. ಹಾಗೆಯೇ ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ ಮುಂತಾದ ವಿಷಯಗಳಲ್ಲಿ, ಸಂಸ್ಕೃತದಿಂದ ತೆಗೆದುಕೊಂಡ ಮಾದರಿಗಳನ್ನು ಬಹಳ ಹೆಚ್ಚಾಗಿ ಬಳಸಿಕೊಂಡಿರುವುದು ಈ ಸನ್ನಿವೇಶಕ್ಕೆ ತನ್ನದೇ ಆದ ಕಾಣಿಕೆಯನ್ನು ಕೊಟ್ಟಿದೆ. ವೈದಿಕ ಯಜಮಾನಿಕೆಯ ಪರವಾಗಿದ್ದ ಸಂಪ್ರದಾಯಕ್ಕೆ ಅಂಟಿಕೊಂಡ ವಿದ್ವಾಂಸರಂತೂ ಸಂಸ್ಕೃತದ ಕಡೆಗಿನ ಓಲುವೆಯಿರುವ ನಿಲುವನ್ನೇ ತಳೆದಿದ್ದಾರೆ.

ಕನ್ನಡ ಮಾತನಾಡುವ ಸಮುದಾಯಗಳ ಮೇಲೆ ಆಗಿರುವ ಸಂಸ್ಕೃತದ ಪ್ರಭಾವವು, ಪದಗಳ ಬಳಕೆಯ ನೆಲೆಯಲ್ಲಿ, ಎರಡು ಬಗೆಯದು. ಓದು-ಬರಹಗಳನ್ನು ತಿಳಿಯದ ಜನರು, ಕನ್ನಡದೊಳಗೆ ನುಸುಳಿರುವ ಸಂಸ್ಕೃತ ಪದಗಳಲ್ಲಿ, ಕನ್ನಡ ಭಾಷೆಯ ಜಾಯಮಾನಕ್ಕೆ ಸರಿಹೊಂದುವ ಬದಲಾವಣೆಗಳನ್ನು ಮಾಡಿಕೊಂಡು, ಯಾವ ಸಂಕೋಚವೂ ಇಲ್ಲದೆ ಬಳಸುತ್ತಾರೆ. (ತದ್ಭವಗಳು) ಅದರ ಬದಲಾಗಿ ವಿದ್ವತ್ತಿನ ಮತ್ತು ಸಾಂಸ್ಕೃತಿಕವಾದ ಜಾಗಗಳಲ್ಲಿ, ಸಂಸ್ಕೃತ ಪದಗಳನ್ನು ಅವು ಇರುವಂತೆಯೇ ಬಳಸುವ (ತತ್ಸಮ) ಮಾದರಿಯು ಬಳಕೆಯಲ್ಲಿದೆ. ವಿಜ್ಞಾನ, ಧರ್ಮ, ಮತ್ತು ಇತರ ಬಗೆಯ ಪಾಂಡಿತ್ಯವನ್ನು ತೋರಿಸುವ ಸಂದರ್ಭಗಳಲ್ಲಿ ಸಂಸ್ಕೃತದ ಮೇಲುಗೈ ಕಂಡುಬರುತ್ತದೆ. ಅಮೂರ್ತವಾದ ಪದಗಳನ್ನು ಹುಟ್ಟಿಸುವಾಗಲಂತೂ ಅಂತಹ ಪದಗಳದೇ ರಾಜ್ಯಭಾರ. ಹೀಗೆ ಆಗುವಾಗ ಅನೇಕ ದ್ರಾವಿಡಮೂಲದ ಪದಗಳು ಸಂಸ್ಕೃತಕ್ಕೆ ತಮ್ಮ ಜಾಗವನ್ನು ತೆರವು ಮಾಡಿವೆ. ಇದರಲ್ಲಿ ಅನಮಾನವೇ ಇಲ್ಲ. ನೇಸರು, ತಿಂಗಳು, ಇರುಳು, ಕಡಲು ಮುಂತಾದ ಲೆಕ್ಕವಿಲ್ಲದಷ್ಟು ಉದಾಹರಣೆಗಳನ್ನು ಕೊಡಬಹುದು. ಮಹಾಪ್ರಾಣಗಳು, ಕಂಠ್ಯ ಮತ್ತು ತಾಲವ್ಯ ಅನುನಾಸಿಕಗಳು, ಪಾರ್ಶ್ವಿಕ ಮತ್ತು ಮೂರ್ಧನ್ಯ ಘರ್ಷಗಳು ಮುಂತಾದ ಧ್ವನಿಗಳು ಕೇವಲ ಮೇಲುಜಾತಿಗಳಲ್ಲಿ ವಿದ್ಯಾವಂತರಲ್ಲಿ ಬಳಕೆಯಲ್ಲಿದ್ದು ಕ್ರಮೇಣ ಅಲ್ಲಿಂದಲೂ ಮಾಯವಾಗುತ್ತಿವೆ. ಅವರಲ್ಲಿಯೂ ಅವು ಬರವಣಿಗೆಯಲ್ಲಿ ಕಾಣಿಸಿಕೊಳ್ಳುವಷ್ಟು ನಿಕರವಾಗಿ ಮಾತಿನಲ್ಲಿ ಇರುವುದಿಲ್ಲ. ಕಾಲಕಳೆದಂತೆ ಻ವುಗಳ ಬಳಕೆಯು ಅಪರೂಪವಾಗುತ್ತಿದೆ. ಪದರಚನೆ ಮತ್ತು ವಾಕ್ಯರಚನೆಗಳ ಹಂತದಲ್ಲಿ ಸಂಸ್ಕೃತವು ಅಷ್ಟೊಂದು ಆಳವಾದ ಪರಿಣಾಮವನ್ನು ಬೀರಿಲ್ಲ. ಈಗ ಇರುವಂತೆ, ಕನ್ನಡದ ಸಾಂಸ್ಕೃತಿಕ ಪದಕೋಶವು ಸಂಸ್ಕೃತದ ಪದಗಳಿಂದ ತುಂಬಿಹೋಗಿದೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಂಗ್ಲಿಷ್ ಭಾಷೆಯ ಪದಗಳಿಗೆ ಸಮಾನವಾದ ಪದಗಳು ಬೇಕಾದಾಗ, ಹಿಂದೆಮುಂದೆ ನೋಡದೆ, ಸಂಸ್ಕೃತಕ್ಕೆ ಮೊರೆಹೊಗುವುದು, ಹೀಗಾಗಲು ಇನ್ನೊಂದು ಕಾರಣ. ಕನ್ನಡದ ಪುಸ್ತಕಗಳು, ಈ ರೀತಿಯ ಪದಗಳನ್ನು ಧಾರಾಳವಾಗಿ ಬಳಸುತ್ತವೆ.

ತಮಿಳಿಗೆ ಹೋಲಿಸಿದರೆ, ಕನ್ನಡದ ಮೇಲೆ ಸಂಸ್ಕೃತದ ಪ್ರಭಾವವು ಜಾಸ್ತಿ. ಹೀಗಾಗಲು, ತಮಿಳುನಾಡು, ದೇಶದ ದಕ್ಷಿಣ ತುದಿಯಲ್ಲಿದ್ದು, ಕರ್ನಾಟಕವು ಸಾಕಷ್ಟು ಮೇಲಿರುವುದು ಕೂಡ ಮುಖ್ಯವಾದ ಕಾರಣ. ಇದರಿಂದ ತಮಿಳು ಭಾಷೆಗೆ ಸಂಸ್ಕೃತವನ್ನು ಸಾಕಷ್ಟು ಪ್ರಮಾಣದಲ್ಲಿ ಹೊರಗಿರಿಸಿ, ದ್ರಾವಿಡಸಂಸ್ಕೃತಿ ಮತ್ತು ಭಾಷೆಗಳಿಗೆ ಸಹಜವಾದ ಅಂಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಈ ಸಂಗತಿಯು ತಮಿಳು ಭಾಷೆ ಮತ್ತು ಅದರ ಸಂಸ್ಕೃತಿಯ ಇತರ ನೆಲೆಗಳಲ್ಲಿ ನಿಚ್ಚಳವಾಗಿ ಕಾಣಿಸಿಕೊಂಡಿದೆ. ಆದರೆ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳು ಆರ್ಯಸಂಸ್ಕೃತಿಯ ಸಂಗಡ ಹೆಚ್ಚಿನ ಸಂಪರ್ಕವನ್ನು ಪಡೆದವು. ಅವುಗಳಿಗೆ ಸಂಸ್ಕೃತವನ್ನು ಹೊರಗಿಡುವುದರ ಬದಲು ಒಳಗೆ ತೆಗೆದುಕೊಳ್ಳುವುದು ಕಡ್ಡಾಯವಾಯಿತು. ಮೂಲದ್ರಾವಿಡ ಭಾಷೆಯಿಂದ ಬೇರೆಯಾದ ನಂತರ ಕನ್ನಡ ಸಾಹಿತ್ಯ ಮತ್ತು ಭಾಷೆಗಳ ಚರಿತ್ರೆಯನ್ನು ಗಮನವಿಟ್ಟು ನೋಡಿದರೆ, ಈ ಮಾತು ಚೆನ್ನಾಗಿ ಗೊತ್ತಾಗುತ್ತದೆ. ಆ ಚರಿತ್ರೆಯ ಕೆಲವು ಹಂತಗಳಲ್ಲಿ ಕನ್ನಡದ ಕೈಮೇಲಾಗಿ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಲು ಪ್ರಯತ್ನಸಿದರೆ, ಉಳಿದಂತೆ ಒಂದೇ ಸಮನೆ ಸಂಸ್ಕೃತದ ಪ್ರಭಾವವು ಮುಂದುವರೆದಿದೆ. ಹನ್ನೆರಡನೆಯ ಶತಮಾನದ ವಚನಚಳುವಳಿಯು ಕನ್ನಡವು ತನ್ನತನವನ್ನು ಗುರುತಿಸಿಕೊಂಡ ಘಟ್ಟಗಳಲ್ಲಿ ಒಂದು. ಮೊದಲಿನಿಂದಲೂ ದ್ರಾವಿಡ ಸಂಸ್ಕೃತಿಗೆ ಸಹಜವಾದ ಕಲಾತ್ಮಕವಾದ ದಾರಿಗಳನ್ನು ಕಾಪಾಡಿಕೊಳ್ಳಬೇಕೆಂಬ ಬಯಕೆಗೂ ಆರ್ಯ-ಸಂಸ್ಕೃತ ಕಲಾಮಾರ್ಗಗಳ ದಬ್ಭಳಿಕೆಗೂ ನಡುವೆ ಪರಸ್ಪರ ತಿಕ್ಕಾಟವು ನಡೆದಿದೆ. ಪಂಪ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಕುಮಾರವ್ಯಾಸ, ಜನ್ನ, ಹರಿಹರ, ರತ್ನಾಕವರ್ಣಿ ಮುಂತಾದ ಕವಿಗಳು ಸಂಸ್ಕೃತದಿಂದ ತೆಗೆದುಕೊಂಡ ಆಶಯಗಳು ಮತ್ತು ಆಕೃತಿಗಳನ್ನು ಕನ್ನಡ ಮನಸ್ಸಿನ ಜಾಯಮಾನಕ್ಕೆ ತಕ್ಕಂತೆ ಬದಲಾಯಿಸಿ ಬಳಸಿಕೊಳ್ಳುವ ಪ್ರಯತ್ನವನ್ನು ಮಾಡಿ, ಅದರಲ್ಲಿ ಗೆಲುವು ಪಡೆದಿದ್ದಾರೆ. ಆದರೆ, ಕನ್ನಡಕ್ಕಿದ್ದ ದ್ರಾವಿಡ ಸಾಧ್ಯತೆಗಳು, ಮರಳಿ ಬರದಂತೆ ಕಳೆದುಹೋದವು. ಈ ಮಾತು ತಮಿಳು ಸಂಸ್ಕೃತಿಯ ವಿಶಿಷ್ಟ ಲಕ್ಷಣಗಳನ್ನು ಗಮನಿಸಿದಾಗ ಎದ್ದು ಕಾಣುತ್ತದೆ. ಕೆಲವು ವಿದ್ವಾಂಸರು ಕನ್ನಡವು ಸಂಸ್ಕೃತದ ಅಭಿಜಾತ ಕೃತಿಗಳು ಕನ್ನಡಕ್ಕೆ ನೀಡಿರುವ ಕೊಡುಗೆಯನ್ನು ಹಾಡಿಹೊಗಳಿದ್ದಾರೆ. ಹೊರಗಿನದನ್ನು ಒಳಗೊಳ್ಳುವ ಕನ್ನಡದ ಈ ಗುಣದಿಂದ, ಅದಕ್ಕೆ ಒಳ್ಳೆಯದೇ ಆಗಿದೆಯೆಂದು ಅವರು ಹೇಳುತ್ತಾರೆ. ಆದರೆ, ಇಂತಹ ಪ್ರಭಾವದಿಂದ, ಸಾಕಷ್ಟು ಮಟ್ಟಿಗೆ ತನ್ನತನವನ್ನು ಕಾಪಾಡಿಕೊಂಡು ಬಂದಿದ್ದ ಜನಪದ ಸಾಹಿತ್ಯ ಹಾಗೂ ಗಿರಿಜನ ಸಾಹಿತ್ಯಗಳು ಅಂಚಿಗೆ ಸರಿಯಬೇಕಾಯಿತೆನ್ನುವುದೂ ನಿಜ. ಸಂಸ್ಕೃತ ಮತ್ತು ಅದು ಪ್ರತಿನಿಧಿಸುವ ಸಂಗತಿಗಳನ್ನು ಕುರಿತ ನಮ್ಮ ನಿಲುವುಗಳು ನಮ್ಮ ಸ್ವಂತ ಸಾಮಾಜಿಕ-ಸಾಂಸ್ಕೃತಿಕ ತಿಳಿವಳಿಕೆ ಹಾಗೂ ಓಳುವೆಗಳನ್ನು ಅವಲಂಬಿಸಿರುತ್ತದೆ. ಆದರೆ, ಪಂಪ, ಬಸವಣ್ಣ, ನಯಸೇನ, ಆಂಡಯ್ಯ ಮತ್ತು ಮುದ್ದಣರು ಈ ಸಮಸ್ಯೆಯನ್ನು ಬಿಡಿಸಿಕೊಳ್ಳಲು ತಮ್ಮದೇ ಆದ ಪರಿಹಾರೋಪಾಯಗಳನ್ನು ಕಂಡುಕೊಂಡರು. ಅವರು ತಮ್ಮ ಆಯ್ಕೆಗಳನ್ನು ವಿವರಿಸಿದ್ದಾರೆ ಮತ್ತು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಇಲ್ಲಿ ನಡೆದಿರುವುದು ಕನ್ನಡದಿಂದ ಸಂಸ್ಕೃತದ ಕಡೆಗಿನ ಅಥವಾ ಅದಕ್ಕೆ ವಿರುದ್ಧವಾದ ಏಕಮುಖ ಚಲನೆಯಲ್ಲ. ಬದಲಾಗಿ, ಕವಿಯ ಹಿನ್ನೆಲೆ ಮತ್ತು ಪರಸ್ಪರ ಬೆರೆತುಕೊಳ್ಳದೆ ದೂರವಿದ್ದ ಸಮುದಾಯಗಳಲ್ಲಿ, ಸಾಹಿತ್ಯವನ್ನು ಕುರಿತಂತೆ ಇದ್ದ ಆಲೋಚನೆಗಳಿಗೆ ಅನುಗುಣವಾಗಿ, ಸಂಸ್ಕರತದ ಕಡೆಗಿನ ಅಥವಾ ಅದರಿಂದ ದೂರ ಹೋಗುವ ಚಲನವಲನಗಳು ನಡೆದಿವೆ. ಕನ್ನಡ ಸಾಹಿತ್ಯವು ಕೇವಲ ಭಾಷಾಂತರ-ರೂಪಾಂತರಗಳ ಹಿಡಿಯದೆ ಸಂಸ್ಕೃತಸಾಹಿತ್ಯವನ್ನು ತನ್ನ ಅಗತ್ಯಗಳಿಗೆ ಅನುಗುಣವಾಗಿ ಮರುರೂಪಿಸುವ ಕೆಲಸವನ್ನು ಮಾಡಿರುವುದರಿಂದ ನಮ್ಮಲ್ಲಿ ಅತ್ಯುತ್ತಮವಾದ ಕೃತಿಗಳು ಬಂದಿವೆಯೆನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಅದೇನೇ ಇರಲಿ ಕರ್ನಾಟಕದಲ್ಲಿ ಆಡಳಿತ ನಡೆಸಿದ ಅನೇಕ ರಾಜಮನೆತನಗಳು, ಸಂಸ್ಕೃತ ಸಾಹಿತಿಗಳು ಮತ್ತು ವಿದ್ವಾಂಸರನ್ನು ತುಂಬು ಮನಸ್ಸಿನಿಂದ ಪ್ರೋತ್ಸಾಹಿಸಿವೆ. ಎಷ್ಟೋ ಸಲ, ಅವು ಆರ್ಯ-ಸಂಸ್ಕೃತ ಸಂಗತಿಗಳೇ ಶ್ರೇಷ್ಠವೆಂಬ ನಿಲುವನ್ನು ತಳೆದಿವೆ. ಇದರ ಪರಿಣಾಮವಾಗಿ, ಕರ್ನಾಟಕವು ತನ್ನ ಇತಿಹಾಸದುದ್ದಕ್ಕೂ, ಹಲವು ವಿಷಯಗಳನ್ನು ಕುರಿತಂತೆ, ಅಖಿಲ ಭಾರತ ಮಟ್ಟದಲ್ಲಿ ಮಹತ್ವದ ಕಾಣಿಕೆ ನೀಡಿದ, ವಿದ್ವಾಂಸರನ್ನು ರೂಪಿಸಿಕೊಟ್ಟಿದೆ. ಅವರು ಸಂಸ್ಕೃತ ಭಾಷೆಯಲ್ಲಿ ಬಹಳ ಮಹತ್ವದ ಕೃತಿಗಳನ್ನು ಬರೆದಿದ್ದಾರೆ. ಶರ್ವವರ್ಮ, (ಕಾತಂತ್ರ ವ್ಯಾಕರಣ) ವಸುಭಾಗಭಟ್ಟ, (ಪಂಚತಂತ್ರ) ಭಾರವಿ, (ಕಿರಾತಾರ್ಜುನೀಯ) ಜಿನಸೇನಾಚಾರ್ಯ, (ಮಹಾಪುರಾಣ) ಮಹಾವೀರ, (ಗಣಿತ ಸಾರಸಂಗ್ರಹ) ತ್ರಿವಿಕ್ರಮಭಟ್ಟ, (ನಳಚಂಪೂ) ವೀರಸೇನ ಮತ್ತು ಜಿನಸೇನ, (ಧವಳಾ, ಜಯ ಧವಳಾ ಮತ್ತು ಮಹಾಧವಳಾ) ಸೋಮದೇವಸೂರಿ, (ಯಶಸ್ತಿಲಕ ಚಂಪೂ) ವಾದಿರಾಜ (ಯಶೋಧರ ಚರಿತ) ಜಯಕೀರ್ತಿ, (ಛಂದೋನುಶಾಸನ) ಬಿಲ್ಹಣ, (ವಿಕ್ರಮಾಂಕದೇವ ಚರಿತ), ಸೋಮೇಶ್ವರ-3, (ಮಾನಸೋಲ್ಲಾಸ) ವಿಜ್ಞಾನೇಶ್ವರ, (ಮಿತಾಕ್ಷರಾ) ಮಧ್ವಚಾರ್ಯ,(37 ಕೃತಿಗಳು) ಸಾಯಣಾಚಾರ್ಯ, (18 ಕೃತಿಗಳು) ಗಂಗಾದೇವಿ, (ಮಧುರಾವಿಜಯ ಅಥವಾ ವೀರಕಂಪಣರಾಯ ಚರಿತ) ಭಾಸ್ಕರಾಚಾರ್ಯ (ಲೀಲಾವತೀ) ಮತ್ತು ಬಸವಭೂಪಾಲರು (ಶಿವತತ್ವರತ್ನಾಕರ) ಅಂತಹ ವಿದ್ವಾಂಸರಲ್ಲಿ ಕೆಲವರು. ಈ ಪಟ್ಟಿಯನ್ನು ಇನ್ನೂ ದೊಡ್ಡದಾಗಿ ಬೆಳೆಸಲು ಸಾಧ್ಯ.

 

ಹೆಚ್ಚಿನ ಓದು ಮತ್ತು ಲಿಂಕುಗಳು:

    1. ‘The language of the Gods in the world of men’ By Sheldon I. Pollock, 2006, University of California Press
    2. ‘Literary cultures in history: reconstructions from South Asia’ edited By Sheldon Pollock, 2003, California Unversity Press
    3. ‘History of grammatical theories in Kannada’ By Jayavant S.Kulli, 1991, Inter National School of Dravidian Linguistics.
    4. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಡಿ.ಎನ್. ಶಂಕರ ಭಟ್, 2000, ಭಾಷಾ ಪ್ರಕಾಶನ, ಮೈಸೂರು.

ಮುಖಪುಟ / ಭಾಷೆ